ಕಾರ್ಪೊರೇಷನ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಒಂದು ಸಮಾನ ಬಂಡವಾಳ ನಿಧಿಗೆ ಅಥವಾ ಸ್ಕಂಧಕ್ಕೆ ಹಣ ಸಲ್ಲಿಸಿ, ಅದನ್ನು ಒಂದು ವ್ಯವಹಾರದಲ್ಲಿ ತೊಡಗಿಸಿ, ಅದರ ಫಲವಾದ ಲಾಭವನ್ನೊ ನಷ್ಟವನ್ನೊ ಹಂಚಿಕೊಳ್ಳುವ ಜನರ ಸಂಘ. ಬ್ರಿಟನ್ ಅಥವಾ ಭಾರತದಲ್ಲಿ ಪರಿಮಿತ ಹೊಣೆ ಕಂಪನಿ ಎಂದು ಕರೆಯುವ ಸಂಸ್ಥಾಪ್ರರೂಪವೇ ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಕಾರ್ಪೊರೇಷನ್ ಎನಿಸಿಕೊಳ್ಳುತ್ತದೆ. ಅಲ್ಲಿಯ ಸಂವೃತ (ಕ್ಲೋಸ್) ಕಾರ್ಪೊರೇಷನ್ ಬಹಳಮಟ್ಟಿಗೆ ಖಾಸಗಿ ಕಂಪನಿಯ ಲಕ್ಷಣಗಳನ್ನೇ ಉಳ್ಳದ್ದಾಗಿದೆ. ಕಂಪನಿ, ಕಾರ್ಪೊರೇಷನ್-ಇವು ರೂಢಿಯಲ್ಲಿ ಪರ್ಯಾಯ ಶಬ್ದಗಳಾಗಿವೆ.       (ನೋಡಿ- ಕಂಪನಿ)

 ನಿರಂತರವಾದ ಉತ್ತರಾಧಿಕಾರದ ಅನುಪೂರ್ವಿ, ಸಾಮಾನ್ಯ ಮುದ್ರೆ, ಆಸ್ತಿಯ ಒಡೆತನದ ಹಕ್ಕು, ಷೇರುಗಳಿದ್ದರೆ ಅವುಗಳ ವರ್ಗಾವಣೆಯ ಅವಕಾಶ, ಷೇರುಗಳ ಅಂಕಿತ ಮೌಲ್ಯಕ್ಕೆ ಅಥವಾ ಸದಸ್ಯರು ನೀಡಿದ ಖಾತರಿಯ ಮೊಬಲಗಿಗೆ ಪರಿಮಿತವಾದ ಹೊಣೆ ಅಥವಾ ಅಮಿತ ಹೊಣೆ-ಹೀಗೆ ಕಂಪನಿಯ ಲಕ್ಷಣಗಳೆಲ್ಲ ಕಾರ್ಪೊರೇಷನಿಗೆ ಇರಬಹುದು.

 ಲಾಭದ ಉದ್ದೇಶದಿಂದ ವ್ಯವಹಾರ ನಡೆಸುವ ಎಲ್ಲ ಸಂಯುಕ್ತ ಬಂಡವಾಳ ಕಂಪನಿಗಳೂ ಕಾರ್ಪೊರೇಷನ್‍ಗಳೇ ಆದರೂ ಭಾರತದಲ್ಲಿ ಕಾರ್ಪೊರೇಷನ್ ಎಂದು ಕರೆಯುವ ಎಲ್ಲ ಸಂಸ್ಥೆಗಳೂ ಕಂಪನಿಗಳಲ್ಲ. ಅವು ವ್ಯಾಪಾರದಲ್ಲೇ ನಿರತವಾಗಬೇಕಾದುದಿಲ್ಲ. ಸಹಕಾರ ಸಂಘಗಳೂ ಜನೋಪಯೋಗಿ ಸಂಸ್ಥೆಗಳೂ ಕಾರ್ಪೊರೇಷನ್‍ಗಳೆನಿಸಿಕೊಳ್ಳುತ್ತವೆ. ಇವುಗಳ ಉದ್ದೇಶಗಳು ಸಂಯುಕ್ತ ಬಂಡವಾಳ ಕಂಪನಿಗಳ ಉದ್ದೇಶಗಳಿಗಿಂತ ಭಿನ್ನವಾದವು. ಧರ್ಮಾರ್ಥ ಸಂಸ್ಥೆಗಳೂ ವ್ಯಾಪಾರ ಸಂಘಗಳೂ ವಾಣಿಜ್ಯ ಸಂಘಗಳೂ ಕಾರ್ಪೊರೇಷನ್‍ಗಳು. ಇವೆಲ್ಲ ಲಾಭ ಸಂಪಾದಿಸದ ಸಂಸ್ಥೆಗಳು. ಸಾಮಾನ್ಯವಾಗಿ ಇವುಗಳ ಸದಸ್ಯರ ಹೊಣೆ ಅವರು ನೀಡುವ ಖಾತರಿಗೆ ಸೀಮಿತವಾಗಿರುತ್ತದೆ. ಸರ್ಕಾರಿ ಉದ್ಯಮಗಳನ್ನು ಅಥವಾ ಲೋಕೋಪಯೋಗಿ ಉದ್ಯಮಗಳನ್ನು ಅವವಕ್ಕಾಗಿಯೇ ಜಾರಿಗೆ ತರಲಾದ ವಿಶಿಷ್ಟ ಕಾಯಿದೆಗಳ ಅಸ್ತಿವಾರದ ಮೇಲೆ ಸ್ವಯಮಾಡಳಿತ ಸಂಸ್ಥೆಗಳಾಗಿ ಸ್ಥಾಪಿಸಿ ಅವಕ್ಕೆ ಪ್ರತ್ಯೇಕ ಕಾನೂನು ವ್ಯಕ್ತಿತ್ವ ದೊರಕಿಸಿಕೊಟ್ಟಾಗ ಅವು ಸಾರ್ವಜನಿಕ ಕಾರ್ಪೊರೇಷನ್ ಎನಿಸಿಕೊಳ್ಳುತ್ತವೆ. ದೊಡ್ಡ ನಗರಗಳ ಪೌರಸಭೆಗಳಿಗೆ ಕಾರ್ಪೊರೇಷನ್ ಎಂಬ ಹೆಸರಿರುತ್ತದೆ. ಅವು ಕಾರ್ಪೊರೇಷನಿನ ಮುಖ್ಯ ಲಕ್ಷಣಗಳನ್ನೆಲ್ಲ ಪಡೆದಿರುವುದುಂಟು. ಎಂದರೆ ಕಾನೂನು ವ್ಯಕ್ತಿತ್ವ, ನಿರಂತರವಾದ ಅನುಪೂರ್ವಿ, ಸಾಮಾನ್ಯ ಮುದ್ರೆ, ಆಸ್ತಿಯ ಒಡೆತನದ ಹಕ್ಕು, ಎಲ್ಲವೂ ಅದಕ್ಕಿರುತ್ತವೆ.

 ಕಾಯಿದೆಯ ಮೂಲಕವೋ ಸನ್ನದಿನ ಮೂಲಕವೋ ಸರ್ಕಾರ ನೀಡಿದ ಪ್ರಯಾಣ ಪತ್ರದ ಮೂಲಕವೋ ಕಾರ್ಪೊರೇಷಿನಿನ ರಚನೆಯಾಗಿರುತ್ತದೆ. ಕೈಗಾರಿಕಾ ಕ್ರಾಂತಿಗೆ ಪೂರ್ವದಲ್ಲೂ ಕಾರ್ಪೋರೇಷನ್‍ಗಳಿದ್ದುವೆಂಬುದು ನಿಸ್ಸಂಶಯ. ಮಧ್ಯಯುಗದಲ್ಲಿದ್ದ ವೃತ್ತಿಸಂಘಗಳು ತಮ್ಮ ಸಾಂಘಿಕ ವ್ಯಕ್ತಿತ್ವಕ್ಕೆ ದೊರೆಯ ಮನ್ನಣೆಗಳಿಸಿದ್ದುವು. ಆದರೂ ಕಾರ್ಪೋರೇಷನ್ ಪ್ರರೂಪಕ್ಕೆ ಪ್ರಾಮುಖ್ಯ ಬಂದದ್ದು ಕೈಗಾರಿಕಾ ಕ್ರಾಂತಿಯಾದ ಮೇಲೆಯೇ. ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡುವುದಕ್ಕೋ ವ್ಯಾಪಾರ ಮಾಡುವುದಕ್ಕೋ ಅಗತ್ಯವಾದ ಅಗಾಧ ಬಂಡವಾಳವನ್ನು ರೂಢಿಸಿಕೊಳ್ಳಲು ಇವು ಸಾಧಕವಾದುವು.

 ಕಾರ್ಪೋರೇಷನ್‍ಗಳಲ್ಲಿ ಅಧಿಕ ಸಂಖ್ಯಾತವಾದವು ವ್ಯವಹಾರಕ್ಷೇತ್ರದ ಸಂಯುಕ್ತ ಬಂಡವಾಳ ಕಂಪನಿಗಳು. ವ್ಯಾಪಾರ ಹಾಗೂ ಉತ್ಪಾದನೆಗಾಗಿ ಕಾರ್ಪೊರೇಷನ್ ಮಾದರಿಯ ಸಂಸ್ಥೆಗಳನ್ನು ರಚಿಸಿರುವುದು ಸಂಪೂರ್ಣ ವರವಾಗಿ ಪರಿಣಮಿಸಿಲ್ಲ. ಈ ರಚನೆಯ ಹಿಂದೆಯೇ ಅನೇಕ ಸಮಸ್ಯೆಗಳೂ ಉದ್ಭವಿಸಿವೆ. ಕಾರ್ಪೊರೇಷನ್ನಿನ ಅತ್ಯಂತ ದೊಡ್ಡ ನ್ಯೂನತೆಯೆಂದರೆ ಅದರ ಅವೈಯಕ್ತಿಕ ಕಾರ್ಯವಿಧಾನ ಹಾಗೂ ದೃಷ್ಟಿ. ಅದನ್ನು ನಡೆಸುವ ಸಲುವಾಗಿ ಆಯ್ಕೆಹೊಂದಿದ ನಿರ್ದೇಶಕರೂ ನೇಮಕವಾದ ಅಧಿಕಾರಿಗಳೂ ಕಾರ್ಮಿಕರ ವಿಚಾರದಲ್ಲಿಯಾಗಲಿ, ಗ್ರಾಹಕರ ವಿಚಾರವಾಗಿಯಾಗಲಿ ನ್ಯಾಯವಾದ ಧೋರಣೆ ತಳೆದಿರದ ಸಂಭವವುಂಟು. ಇದರಿಂದ ಕಾರ್ಪೊರೇಷನಿನ ಒಡೆತನಕ್ಕೂ (ಎಂದರೆ ಷೇರುದಾರರಿಗೂ) ಕಾರ್ಪೊರೇಷನಿನ ನಿಯಂತ್ರಣಕ್ಕೂ (ಎಂದರೆ ನಿರ್ದೇಶಕರಿಗೂ) ಭಿನ್ನತೆ ಏರ್ಪಡಿಸಬಹುದು. ಕಾರ್ಮಿಕರ ಅತಿಯಾದ ದುಡಿತ, ಗ್ರಾಹಕರ ಶೋಷಣೆ, ಏಕಸ್ವಾಮ್ಯಗಳ ಬೆಳೆವಣಿಗೆ, ಆರ್ಥಿಕ ಶಕ್ತಿಯ ಕೇಂದ್ರೀಕರಣ, ಅಲ್ಪಸಂಖ್ಯೆಯ ದೊಡ್ಡ ಷೇರುದಾರರಿಗೂ ಬಹುಸಂಖ್ಯೆಯ ಸಣ್ಣ ಷೇರುದಾರರಿಗೂ ಭಿನ್ನತೆ-ಇವು ಕಾರ್ಪೊರೇಷನ್ ವ್ಯವಸ್ಥೆಯ ಕೆಲವು ಸಮಸ್ಯೆಗಳು. ಆರ್ಥಿಕ ಸ್ವಾತಂತ್ರ್ಯ, ಸಮತೆ ಹಾಗೂ ಸೋದರತ್ವಗಳು ಇಲ್ಲದವರೆಗೂ ರಾಜಕೀಯ ಸ್ವಾತಂತ್ರ್ಯ, ಸಮತೆ ಹಾಗೂ ಬಂಧುತ್ವಗಳು ಇರುವುದು ಸಾಧ್ಯವಿಲ್ಲವೆಂಬ ತತ್ತ್ವವನ್ನು ಇದು ಸಿದ್ಧಪಡಿಸುತ್ತದೆ; ಆಧುನಿಕ ಯುಗದಲ್ಲಿ ಕಾರ್ಪೊರೇಷನ್‍ಗಳನ್ನು ಸಾಮಾಜಿಕ ನಿಯಂತ್ರಣಕ್ಕೆ ಒಳಪಡಿಸಬೇಕೆಂಬುದರ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಮಹಾತ್ಮಾ ಗಾಂಧಿಯವರು ಬೃಹತ್‍ಪ್ರಮಾಣದ ಕಾರ್ಪೊರೇಷನ್ ಪ್ರರೂಪದ ದೊಡ್ಡ ಕೈಗಾರಿಕೆಯನ್ನು ಜನಹಿತದ ನ್ಯಾಸವೆಂದೂ ದೊಡ್ಡ ಉದ್ಯಮಪತಿಗಳನ್ನು ಜನಗಳ ನ್ಯಾಸಧಾರಿಗಳೆಂದೂ ಪರಿಗಣಿಸಿದ್ದರು. ಕಾರ್ಮಿಕರ ಬಾಳ್ವೆಗೆ ಅವಶ್ಯವಾದಷ್ಟು ವೇತನ ನೀಡಿಕೆ, ಗ್ರಾಹಕರಿಗೆ ಒಳ್ಳೆಯ ಹಾಗೂ ಕಡಿಮೆ ಬೆಲೆಯ ಪದಾರ್ಥ ಸರಬರಾಯಿ, ಷೇರುದಾರರು ಹೂಡಿರುವ ಬಂಡವಾಳಕ್ಕೆ ನ್ಯಾಯವಾದ ವರಮಾನದ ಹಂಚಿಕೆ, ಸರ್ಕಾರಕ್ಕೆ ಕೊಡಬೇಕಾದ ತೆರಿಗೆಯ ಪಾವತಿ-ಇವು ಬೃಹತ್ ಕೈಗಾರಿಕೆಯ ಕರ್ತವ್ಯಗಳೆಂದು ಗಾಂಧೀಜಿ ಹೇಳಿದ್ದಾರೆ.             

  (ಜೆ.ಕೆ.ಐ.)